ಇಂದರ್‍ಕುಮಾರ್ ಗುಜ್ರಾಲ್
(1919- ) ದೇಶದ ಹನ್ನೆರಡನೆಯ ಪ್ರಧಾನಿ. ಏಪ್ರಿಲ್ 21, ಸೋಮವಾರ 1997ರಂದು ಪ್ರಮಾಣವಚನ ಸ್ವೀಕಾರ. ಶ್ರೀ.ಹೆಚ್.ಡಿ.ದೇವೇಗೌಡ ಅವರಿಗೆ ಕಾಂಗ್ರೆಸ್ ಬೆಂಬಲ ಹಿಂದಕ್ಕೆ ಪಡೆದ ಮೇಲೆ; ಗೌಡರು ವಿಶ್ವಾಸ ಮತ ಯಾಚನೆಯಲ್ಲಿ ಯಶ ಕಾಣಲಿಲ್ಲ; ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದರು; ನಂತರ ಗುಜ್ರಾಲ್ ಪ್ರಧಾನಿ ಪಟ್ಟಕ್ಕೆ - ಸಂಯುಕ್ತ ರಂಗದ ನೂತನ ನಾಯಕನಾಗಿ ಇವರ ಆಯ್ಕೆಯಲ್ಲಿ ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಪ್ರಮುಖ ಪಾತ್ರ ವಹಿಸಿದರು.

	ವಿದ್ವಾಂಸ, ವಿನಯ ಸಂಪನ್ನ ರಾಜಕಾರಣಿ, ಯಶಸ್ವೀ ವಿದೇಶಾಂಗ ಸಚಿವ, ಕಲೆ-ಸಾಹಿತ್ಯಾಸಕ್ತ; ಮಿಗಿಲಾಗಿ ಭಾರತ-ಪಾಕಿಸ್ತಾನಗಳ ನಡುವೆ ಸ್ನೇಹವಿರಬೇಕೆಂದು ಹಂಬಲಿಸುವ ಗುಜ್ರಾಲ್ ಎಡಪಂಥೀಯ ಧೋರಣೆಯವರು. ಪ್ರಗತಿಶೀಲ-ಜಾತ್ಯತೀತ ಧೋರಣೆಗಳಲ್ಲಿ ಅನನ್ಯ ಶ್ರದ್ಧೆ.

	ತಂದೆ ಅವತಾರ್ ನಾರಾಯಣ್ ಗುಜ್ರಾಲ್, ತಾಯಿ ಶ್ರೀಮತಿ ಪುಷ್ಪಾ ಗುಜ್ರಾಲ್. ಡಿಸೆಂಬರ್ 4, 1919 ರಂದು ಅಂದಿನ ಅವಿಭಜಿತ ಪಂಜಾಬಿನ, ಇಂದಿನ ಪಾಕಿಸ್ತಾನದಲ್ಲಿರುವ ಝೀಲಂನಲ್ಲಿ ಜನನ. ಎಂ. ಎ. ಬಿ.ಕಾಂ. ಪಿ.ಹೆಚ್.ಡಿ ಪದವಿ. ಇಂದರ್‍ಗುಜ್ರಾಲ್ ಅವರದು ಸ್ವಾತಂತ್ರ್ಯ ಹೋರಾಟಗಾರರ ಮನೆತನ. ಅವರ ತಾಯಿ ತಂದೆ ಇಬ್ಬರೂ ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯ. ಹನ್ನೊಂದನೆಯ ವಯಸ್ಸಿನ ಎಳೆಯನಿರುವಾಗಲೇ ಐ.ಕೆ. ಗುಜ್ರಾಲ್, ಸ್ವತಃ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ 1931ರಲ್ಲಿ ಬಂಧನ. ಝೀಲಂ ಪಟ್ಟಣದಲ್ಲಿ ಎಳೆಯ ಬಾಲಕರನ್ನು ಹೋರಾಟಕ್ಕೆ ಅಣಿಗೊಳಿಸಿದ್ದಕ್ಕಾಗಿ ಅವರಿಗೆ ಪೋಲಿಸರಿಂದ ಅಮಾನುಷ ಹೊಡೆತ. ಕ್ವಿಟ್ ಇಂಡಿಯಾ ಆಂದೋಲನ 1942ರ ಸಮಯದಲ್ಲಿ ತುರಂಗವಾಸ.

	ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ದೇಶ ವಿಭಜನೆಯ ಫಲವಾಗಿ ದೆಹಲಿಯತ್ತ ಬಂದು ಮರು ವಸತಿ ಕಂಡವರು. ಇತರರಿಗೂ ನೆರವಾದರು. ಪರೋಪಕಾರಿ ಎಂದು ಪ್ರೀತಿ ಪಾತ್ರರಾದರು. 1957ರಿಂದ ದೆಹಲಿ ಸಾರ್ವಜನಿಕ ಜೀವನದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಏರಿದರು. 1959ರಲ್ಲಿ ನವದೆಹಲಿ ನಗರಸಭೆಯ ಉಪಾಧ್ಯಕ್ಷ ಹುದ್ದೆ ತಳಮಟ್ಟದ ಲೋಕತಂತ್ರ ಅನುಭವ ನೀಡಿತು. 1964ರಿಂದ 1976 ರವರೆಗೆ ಸಂಸತ್ ಸದಸ್ಯ; ಇಂದಿರಾಗಾಂಧಿಯ ನಿಕಟವರ್ತಿ 1989ರಿಂದ 1991 ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ; 1967 ರಿಂದ 1976ರ ವರೆಗೆ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವ ಹುದ್ದೆ ಸೇರಿದಂತೆ ಹಲವಾರು ಖಾತೆ ನಿರ್ವಹಣೆ; ಇಂದಿರಾಗಾಂಧಿ ಪುತ್ರ ಸಂಜಯ್‍ಗಾಂಧಿ ಅವಕೃಪೆಗೆ ಪಾತ್ರ; ರಷ್ಯದಲ್ಲಿ ಭಾರತದ ರಾಯಭಾರಿ-1976 ರಿಂದ 1980ರವರೆಗೆ; 1969ರಲ್ಲಿ ಕಾಂಗ್ರೆಸ್ ಹೋಳಾದಾಗ ಇಂದಿರಾಗಾಂಧಿಯವರ ಚಿಂತನ ಚಿಲುಮೆಯ ಸಕ್ರಿಯ ಸದಸ್ಯ; 1989-90ರಲ್ಲಿ ವಿ. ಪಿ. ಸಿಂಗ್ ಸರ್ಕಾರದಲ್ಲಿ ವಿದೇಶಾಂಗ. ಸಚಿವ ಹೊಗಳಿಕೆ ತೆಗಳಿಕೆಗಳೆರಡರ ಮಹಾಪೂರ ಅವರ ಮೇಲೆ; 1996ರ ಜೂನ್‍ನಿಂದ ಮತ್ತೆ ಪ್ರಧಾನಿಯಾಗುವ ಮೊದಲು ವಿದೇಶಾಂಗ ಸಚಿವ; ಜಲಸಂಪನ್ಮೂಲ ಖಾತೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಿದರು.

	ವಿದೇಶಗಳಲ್ಲಿ ನಡೆದ ಹಲವಾರು ಸಭೆ-ಸಮ್ಮೇಳನಗಳ ನಾಯಕರಾಗಿ ಐ. ಕೆ. ಗುಜ್ರಾಲ್ ಸೇವೆ, ದೇಶಕ್ಕೆ ಹೆಸರು ತಂದುಕೊಟ್ಟಿವೆ. ಜಾಲಂಧರ್‍ನ ನಾರಿ ನಿಕೇತನ ಟ್ರಸ್ಟ್., ಎ. ಎನ್. ಗುಜ್ರಾಲ್ ಮೆಮೋರಿಯಲ್ ಶಾಲೆ ಅಧ್ಯಕ್ಷ; ಭಾರತ-ಪಾಕ್ ಸ್ನೇಹ ಸಂಘದ ಅಧ್ಯಕ್ಷ; ಇನ್ನೂ ಹಲವು ಹತ್ತು ಸಂಘ-ಸಂಸ್ಥೆಗಳ ಜತೆ ಒಡನಾಟ. ರಾಷ್ಟ್ರೀಯ-ಅಂತಾರಾಷ್ಟ್ರೀಯ ವ್ಯವಹಾರಗಳ ಮೇಲೆ ಲೇಖನ ವ್ಯವಸಾಯ; ಜತೆಗೆ ರಂಗಭೂಮಿ ಆಸಕ್ತಿ; ಉರ್ದುಭಾಷೆಯಲ್ಲಿ ಅಪರಿಮಿತ ಪಾಂಡಿತ್ಯ; ಆಳವಾದ ಅಧ್ಯಯನ ಶೀಲ ಪ್ರವೃತ್ತಿ; ಸಂಭಾಷಣಾ ಚತುರ, ಸರಳ-ಸ್ನೇಹನಡೆ-ಒಲವು-ವಾತ್ಸಲ್ಯಗಳಿಗೆ ಇನ್ನೊಂದು ಹೆಸರು ಇಂದರ್‍ಕುಮಾರ್ ಗುಜ್ರಾಲ್.

	ರಾಜೀವ್‍ಗಾಂಧೀ ಹತ್ಯೆ ಕುರಿತ ತನಿಖಾವರದಿ ಸಂಬಂಧವಾಗಿ ಮಿತ್ರಪಕ್ಷ ಡಿ.ಎಂ.ಕೆ.ಯನ್ನು ಕೈ ಬಿಡಲಾಗದ ಕಾರಣ, ಸಂಯುಕ್ತ ರಂಗ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಹಿಂದಕ್ಕೆ ಪಡೆಯಿತು, ಪ್ರಧಾನಿ ಪದವಿ ಹೋಯಿತು. ಮಧ್ಯಂತರ ಚುನಾವಣೆಗೆ 1998ರಲ್ಲಿ ದೇಶ ಎದುರಿಸಬೇಕಾಯಿತು. ಎರಡನೆಯ ಬಾರಿಗೆ ವಾಜಪೇಯಿ ಪ್ರಧಾನಿಯಾದರು.													

	(ಕೆ.ಎಸ್.ಅಚ್ಯುತನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ